ಮಾನ್ವಿ: ವಿಜ್ಞಾನ ಎಂದರೆ ಕೇವಲ ಪಠ್ಯಪುಸ್ತಕಗಳಿಗೆ ಸೀಮಿತವಾದ ವಿಷಯವಲ್ಲ. ನಮ್ಮ ಸುತ್ತಮುತ್ತ ನಡೆಯುವ ಪ್ರತಿಯೊಂದು ಘಟನೆಗಳ ಹಿಂದಿರುವ ಕಾರಣಗಳನ್ನು ತಿಳಿದುಕೊಳ್ಳಲು ಪ್ರಶ್ನಿಸುವುದು, ಪರಿಶೀಲಿಸುವುದು ಹಾಗೂ ಪ್ರಯೋಗಗಳ ಮೂಲಕ ಉತ್ತರ ಕಂಡುಕೊಳ್ಳುವುದೇ ನಿಜವಾದ ವಿಜ್ಞಾನ. ಆದ್ದರಿಂದ ವಿದ್ಯಾರ್ಥಿಗಳು ಬಾಲ್ಯದಿಂದಲೇ ಪ್ರಶ್ನಿಸುವ ಮನೋಭಾವ ಮತ್ತು ವೈಜ್ಞಾನಿಕ ಚಿಂತನೆಯನ್ನು ಬೆಳೆಸಿಕೊಳ್ಳಬೇಕು ಎಂದು ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಕರಿಬಸಯ್ಯ ಹೇಳಿದರು.
ಪಟ್ಟಣದ ಕಲ್ಮಠ ಶಾಲೆಯಲ್ಲಿ ಗುರುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಆಕಾಶ ನೀಲಿಯಾಗಿ ಕಾಣುವುದೇಕೆ? ಮಳೆ ಏಕೆ ಬರುತ್ತದೆ? ಎಂಬಂತಹ ಸಾಮಾನ್ಯ ಪ್ರಶ್ನೆಗಳಿಂದಲೇ ವೈಜ್ಞಾನಿಕ ಅನ್ವೇಷಣೆ ಆರಂಭವಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸೂಕ್ಷ್ಮವಾಗಿ ಗಮನಿಸಿ, ಪ್ರತಿಯೊಂದು ವಿಷಯದ ಹಿಂದಿರುವ ವೈಜ್ಞಾನಿಕ ಕಾರಣಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸಬೇಕು. ವಿಜ್ಞಾನವು ನಮ್ಮ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಿದ್ದು, ಮಾನವನ ಜೀವನಮಟ್ಟ ಸುಧಾರಣೆ ಹಾಗೂ ಜಗತ್ತಿನ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ತಿಳಿಸಿದರು.
ಕಲ್ಮಠ ಆಯುರ್ವೇದ ಕಾಲೇಜಿನ ಆಡಳಿತಾಧಿಕಾರಿ ಉಮಾಶಂಕರ ಮಾತನಾಡಿ, ವಿಜ್ಞಾನಿಗಳ ಸಾಧನೆಗಳ ಹಿಂದೆ ಕುತೂಹಲ, ನಿರಂತರ ಪರಿಶ್ರಮ ಹಾಗೂ ಸಂಶೋಧನಾ ಮನೋಭಾವ ಅಡಗಿದೆ. ಸರ್ ಐಸಾಕ್ ನ್ಯೂಟನ್ ಅವರು ಮರದಿಂದ ಸೇಬು ಕೆಳಗೆ ಬೀಳುವ ಘಟನೆಯ ಕುರಿತು ಚಿಂತನೆ ನಡೆಸಿದ್ದು, ಗುರುತ್ವಾಕರ್ಷಣೆಯ ಅಧ್ಯಯನಕ್ಕೆ ಪ್ರೇರಣೆಯಾಯಿತು. ಅದೇ ರೀತಿ ಆರ್ಕಿಮಿಡಿಸ್ ಹಾಗೂ ಸರ್ ಎಂ. ವಿಶ್ವೇಶ್ವರಯ್ಯ ಅವರ ವೈಜ್ಞಾನಿಕ ಚಿಂತನೆಗಳು ಮತ್ತು ಸಾಧನೆಗಳು ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳು ವಿಜ್ಞಾನವನ್ನು ಕೇವಲ ಪರೀಕ್ಷೆಯಲ್ಲಿ ಅಂಕ ಗಳಿಸುವ ವಿಷಯವಾಗಿ ಪರಿಗಣಿಸದೆ, ಪ್ರಾಯೋಗಿಕವಾಗಿ ಕಲಿಯುವ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ಹೊಸ ಆವಿಷ್ಕಾರಗಳು ಹಾಗೂ ಸಂಶೋಧನೆಗಳ ಬಗ್ಗೆ ತಿಳಿದುಕೊಳ್ಳುವ ಮೂಲಕ ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ರಜಪೂತ್ ನಾವೆಲ್ಟೀಸ್ ಮಾಲೀಕ ಲಲಿತ್ ಸಿಂಗ್ ಹಾಗೂ ಕಲ್ಮಠ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಮಂಜುನಾಥ ಕಮತರ ಅವರು ವಿಜ್ಞಾನ ದಿನಾಚರಣೆಯ ಮಹತ್ವ ಕುರಿತು ಮಾತನಾಡಿದರು.
ವಿಜ್ಞಾನ ದಿನಾಚರಣೆಯ ಅಂಗವಾಗಿ ಕಲ್ಮಠ ಶಾಲೆಯ ವಿಜ್ಞಾನ ಶಿಕ್ಷಕರಾದ ನರಸಿಂಹಲು ಬಿ. ಹಾಗೂ ಗೀತಾ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ವಿವಿಧ ವೈಜ್ಞಾನಿಕ ಪ್ರಯೋಗಗಳನ್ನು ಪ್ರದರ್ಶಿಸಿದರು.
ಬೆಂಕಿಯಿಲ್ಲದೆ ಹಾಲು ಉಕ್ಕಿಸುವುದು, ಬೆಂಕಿಯಿಲ್ಲದೆ ಹತ್ತಿಯನ್ನು ಉರಿಸುವುದು, ಆಮ್ಲ ಮತ್ತು ಪ್ರತ್ಯಾಮ್ಲಗಳ ತಟಸ್ಥೀಕರಣ, ಲೋಹಗಳು ಆಮ್ಲಗಳೊಂದಿಗೆ ವರ್ತಿಸುವ ವಿಧಾನ, ನೀರಿನ ಶುದ್ಧೀಕರಣ, ಮೆಗ್ನೀಸಿಯಂ ತಂತಿಯನ್ನು ಉರಿಸುವುದು, ಬಿಸಿಗಾಳಿ ಮೇಲಕ್ಕೆ ಏರುವುದು, ವಸ್ತುಗಳು ಸ್ಥಳವನ್ನು ಆಕ್ರಮಿಸಿಕೊಳ್ಳುವುದು ಹಾಗೂ ವಸ್ತುಗಳು ಉರಿಯಲು ಆಮ್ಲಜನಕದ ಅವಶ್ಯಕತೆ ಇರುವುದನ್ನು ತೋರಿಸುವುದು ಸೇರಿದಂತೆ ಹಲವು ಪ್ರಯೋಗಗಳನ್ನು ವಿದ್ಯಾರ್ಥಿಗಳು ವೇದಿಕೆಯಲ್ಲಿ ಪ್ರಾತ್ಯಕ್ಷಿಕೆಗಳ ಮೂಲಕ ವಿವರಿಸಿದರು.
ವಿದ್ಯಾರ್ಥಿಗಳು ಪ್ರದರ್ಶಿಸಿದ ವೈಜ್ಞಾನಿಕ ಪ್ರಯೋಗಗಳು ಸಹಪಾಠಿಗಳಲ್ಲಿ ಕುತೂಹಲ ಮೂಡಿಸಿದವು. ಪ್ರತಿಯೊಂದು ಪ್ರಯೋಗದ ಹಿಂದಿರುವ ವೈಜ್ಞಾನಿಕ ತತ್ವಗಳನ್ನು ತಿಳಿದುಕೊಂಡ ವಿದ್ಯಾರ್ಥಿಗಳು ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಲ್ಮಠ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಪ್ರಭಯ್ಯಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಇಂತಹ ಪ್ರಾಯೋಗಿಕ ಕಾರ್ಯಕ್ರಮಗಳು ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವುದರ ಜೊತೆಗೆ ಅವರ ಸೃಜನಶೀಲತೆ ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಕೇಮ್ಯಾನಾಯ್ಕ, ಎಂ.ಎಂ. ಹಿರೇಮಠ, ಭ್ರಮರಾಂಬ, ಪ್ರಭಾವತಿ, ಸೌಮ್ಯ, ರಾಘವೇಂದ್ರ ಹಾಗೂ ಕಲ್ಮಠ ಶಾಲಾ ಸಂಸತ್ ಸದಸ್ಯರಾದ 9ನೇ ತರಗತಿಯ ಪ್ರದೀಪ್ ಕುಮಾರ್ ಮತ್ತು 7ನೇ ತರಗತಿಯ ಓಂಕಾರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಕ್ಷಕಿ ರೂಪಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ರಿಜ್ವಾನ ಬೇಗಂ ಸ್ವಾಗತಿಸಿದರು. ಮಹಾಂತಮ್ಮ ವಂದಿಸಿದರು.



