ಮಾನ್ವಿ: ಬರಗಾಲದ ಹಿನ್ನೆಲೆಯಲ್ಲಿ ಪೋತ್ನಾಳ ಹಿರೇಹಳ್ಳದ ವ್ಯಾಪ್ತಿಯ 36ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರಗೊಂಡಿದ್ದು, ಜನರು ಹಾಗೂ ಜಾನುವಾರುಗಳಿಗೆ ನೀರಿನ ಸೌಲಭ್ಯ ಕಲ್ಪಿಸಲು ಕೂಡಲೇ ಹಿರೇಹಳ್ಳಕ್ಕೆ ನೀರು ಹರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ತಾಲೂಕಿನ ಸಿಂಧನೂರು ರಸ್ತೆಯ ಬಳಗನೂರು ಕ್ರಾಸ್ನಲ್ಲಿ ಜಮಾಯಿಸಿದ ರೈತರು ಹಾಗೂ ಗ್ರಾಮಸ್ಥರು, ಪೋತ್ನಾಳ ಹಿರೇಹಳ್ಳಕ್ಕೆ ನೀರು ಹರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಸಿಂಧನೂರು ತಹಶೀಲ್ದಾರ್ ಅರುಣಕುಮಾರ್ ದೇಸಾಯಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಅಮೀನ್ ಪಾಷಾ ದಿದ್ದಿಗಿ, ಪೋತ್ನಾಳ ಹಿರೇಹಳ್ಳದ ವ್ಯಾಪ್ತಿಗೆ ಒಳಪಡುವ 36ಕ್ಕೂ ಹೆಚ್ಚು ಗ್ರಾಮಗಳಲ್ಲಿ ಬರಗಾಲದಿಂದಾಗಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಜನರು ಹಾಗೂ ಜಾನುವಾರುಗಳಿಗೆ ಅಗತ್ಯವಿರುವ ನೀರಿನ ಸೌಲಭ್ಯ ದೊರೆಯದೆ ಗ್ರಾಮೀಣ ಭಾಗದ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.
ಮಳೆ ಕೊರತೆಯಿಂದಾಗಿ ಹಳ್ಳದಲ್ಲಿ ನೀರಿನ ಹರಿವು ಕಡಿಮೆಯಾಗಿದ್ದು, ಅಂತರ್ಜಲ ಮಟ್ಟವೂ ಕುಸಿಯುತ್ತಿದೆ. ಇದರಿಂದ ಕೊಳವೆಬಾವಿಗಳಲ್ಲಿ ನೀರಿನ ಲಭ್ಯತೆ ಕಡಿಮೆಯಾಗುವ ಆತಂಕ ಎದುರಾಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮಸ್ಕಿ, ಬಸಾಪುರ ಹಾಗೂ ಗೂಗೆಬಾಳ ಎಸ್ಕೇಪ್ಗಳ ಮೂಲಕ ಪೋತ್ನಾಳ ಹಿರೇಹಳ್ಳಕ್ಕೆ ನೀರು ಹರಿಸಿದರೆ ಹಳ್ಳದ ವ್ಯಾಪ್ತಿಯ ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗುವುದರ ಜೊತೆಗೆ ಕೊಳವೆಬಾವಿಗಳ ಅಂತರ್ಜಲ ಮಟ್ಟ ಹೆಚ್ಚಳವಾಗಲು ಸಹಕಾರಿಯಾಗಲಿದೆ. ಆದ್ದರಿಂದ ವಿಳಂಬ ಮಾಡದೆ ಹಿರೇಹಳ್ಳಕ್ಕೆ ನೀರು ಹರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಿಂಧನೂರು ತಹಶೀಲ್ದಾರ್ ಅರುಣಕುಮಾರ್ ದೇಸಾಯಿ ಅವರು ರೈತರ ಮನವಿ ಸ್ವೀಕರಿಸಿ, ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು.
ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ, ಮುಂದಿನ ಎರಡು ಮೂರು ದಿನಗಳೊಳಗೆ ಪೋತ್ನಾಳ ಹಿರೇಹಳ್ಳಕ್ಕೆ ನೀರು ಹರಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಅಧಿಕಾರಿಗಳ ಭರವಸೆಗೆ ಸ್ಪಂದಿಸಿದ ರೈತ ಮುಖಂಡರು, ಗ್ರಾಮೀಣ ಭಾಗದ ಜನರು ಹಾಗೂ ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ತ್ವರಿತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಬಸವರಾಜ ಗುಡಿಹಾಳ, ದುರುಗಪ್ಪ ತಡಕಲ್, ನಾಗನಗೌಡ ಖರಬದಿನ್ನಿ, ಆದಪ್ಪ ಸಾಹುಕಾರ ದಿದ್ದಿಗಿ, ಚೆನ್ನನಗೌಡ ಬನ್ನಿಗನೂರು, ಯಲ್ಲಪ್ಪ ಉಟಕನೂರು, ಪಾರ್ಶ್ವನಾಥ ಗೌಡ, ಮಲ್ಲೇಶಪ್ಪ ದೇವರಮನಿ, ಬಸಲಿಂಗಪ್ಪ, ಗಿರಿ ರೆಡ್ಡಿ, ಶಿವಕುಮಾರ, ರಾಮು ನಾಯಕ, ಶರಣಕುಮಾರ ಮುದ್ದಂಗುಡ್ಡಿ, ಹುಲುಗಪ್ಪ ದಿದ್ದಿಗಿ, ದೇವಪ್ಪ ರಾಮತ್ನಾಳ ಸೇರಿದಂತೆ ವಿವಿಧ ಗ್ರಾಮಗಳ ನೂರಾರು ರೈತರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.



