ಗಿಲ್ಲೆಸೂಗೂರು, ನ.12: ಮಕ್ಕಳನ್ನು ಸಾಂಕ್ರಾಮಿಕ ಹಾಗೂ ಮಾರಣಾಂತಿಕ ಕಾಯಿಲೆಗಳಿಂದ ರಕ್ಷಿಸಲು ನಿಗದಿತ ವೇಳಾಪಟ್ಟಿಯಂತೆ ಲಸಿಕೆಗಳನ್ನು ಹಾಕಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಮಟಮಾರಿ ಆರೋಗ್ಯ ಕೇಂದ್ರದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅರವಿಂದ ಕುಮಾರ ಹೇಳಿದರು.
ಸಮೀಪದ ತುಂಗಭದ್ರಾ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗಿಲ್ಲೆಸೂಗೂರು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಲಸಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿವರ್ಷ ನವೆಂಬರ್ 10ರಂದು ವಿಶ್ವ ಲಸಿಕಾ ದಿನವನ್ನು ಆಚರಿಸಲಾಗುತ್ತದೆ. ಲಸಿಕೆಗಳ ಮೂಲಕ ತಡೆಗಟ್ಟಬಹುದಾದ ರೋಗಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಹಾಗೂ ಮಕ್ಕಳು ಮತ್ತು ಗರ್ಭಿಣಿಯರಿಗೆ ಸಕಾಲದಲ್ಲಿ ಲಸಿಕೆ ನೀಡುವ ಮಹತ್ವವನ್ನು ತಿಳಿಸುವುದು ಈ ದಿನಾಚರಣೆಯ ಪ್ರಮುಖ ಉದ್ದೇಶವಾಗಿದೆ ಎಂದು ವಿವರಿಸಿದರು.
ಲಸಿಕೆಗಳು ತಾಯಿ ಮತ್ತು ಮಗುವಿನ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ತಾಯಿ ಮತ್ತು ಶಿಶು ಮರಣ ಪ್ರಮಾಣವನ್ನು ಕಡಿಮೆ ಮಾಡುವಲ್ಲಿಯೂ ಲಸಿಕಾಕರಣ ಸಹಕಾರಿಯಾಗಿದೆ. ಮಗುವಿನ ಜನನದಿಂದಲೇ ಸರ್ಕಾರ ನಿಗದಿಪಡಿಸಿರುವ ಲಸಿಕಾ ವೇಳಾಪಟ್ಟಿಯಂತೆ ಎಲ್ಲ ಲಸಿಕೆಗಳನ್ನು ತಪ್ಪದೇ ಹಾಕಿಸಬೇಕು. ಗರ್ಭಿಣಿಯರು ಆರೋಗ್ಯ ಇಲಾಖೆಯ ಸಲಹೆಯಂತೆ ಅಗತ್ಯ ಲಸಿಕೆಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಪೋಲಿಯೊ, ದಡಾರ, ಕಾಮಾಲೆ, ಬಾಲಕ್ಷಯ ಸೇರಿದಂತೆ ಲಸಿಕೆಗಳ ಮೂಲಕ ತಡೆಗಟ್ಟಬಹುದಾದ 12 ಅಪಾಯಕಾರಿ ರೋಗಗಳಿಂದ ಮಕ್ಕಳನ್ನು ರಕ್ಷಿಸಲು ಲಸಿಕಾಕರಣ ನೆರವಾಗುತ್ತದೆ. ಯಾವುದೇ ಲಸಿಕೆಯನ್ನು ತಪ್ಪಿಸದೆ ಪೂರ್ಣ ಪ್ರಮಾಣದಲ್ಲಿ ಲಸಿಕೆ ಹಾಕಿಸುವುದು ಪ್ರತಿಯೊಬ್ಬ ಪಾಲಕರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಶಶಿಕಲಾ ಮಾತನಾಡಿ, 1974ರಿಂದ ಈಚೆಗೆ ಲಸಿಕಾಕರಣದ ಪರಿಣಾಮವಾಗಿ ವಿಶ್ವದಾದ್ಯಂತ 15 ಕೋಟಿಗೂ ಹೆಚ್ಚು ಜೀವಗಳನ್ನು ಉಳಿಸಲಾಗಿದೆ. ಮಕ್ಕಳಿಗೆ ಅಗತ್ಯವಿರುವ ಎಲ್ಲ ಲಸಿಕೆಗಳನ್ನು ಸಕಾಲದಲ್ಲಿ ಕೊಡಿಸುವ ಮೂಲಕ ಆರೋಗ್ಯವಂತ ಭವಿಷ್ಯದ ಪೀಳಿಗೆಯನ್ನು ರೂಪಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಆರೋಗ್ಯ ನಿರೀಕ್ಷಣಾಧಿಕಾರಿ ಅರುಣ ಕುಮಾರ ಮಾತನಾಡಿ, ಲಸಿಕೆಗಳ ಕುರಿತು ಸಮಾಜದಲ್ಲಿ ಇರುವ ತಪ್ಪು ಕಲ್ಪನೆಗಳನ್ನು ದೂರಮಾಡಿ ವೈಜ್ಞಾನಿಕ ಅರಿವು ಬೆಳೆಸುವುದು ಅಗತ್ಯವಾಗಿದೆ. ಪಾಲಕರು ತಮ್ಮ ಮಕ್ಕಳ ಲಸಿಕಾ ಕಾರ್ಡ್ಗಳನ್ನು ನಿಯಮಿತವಾಗಿ ಪರಿಶೀಲಿಸಿ, ನಿಗದಿತ ದಿನಾಂಕಗಳಂದು ಲಸಿಕೆಗಳನ್ನು ಹಾಕಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರಾದ ಮಣಿರಮ್ಮ, ಸುಶೀಲಾ, ಆಶಾ ಕಾರ್ಯಕರ್ತೆ ಜ್ಯೋತಿ ಹಾಗೂ ಮಕ್ಕಳ ತಾಯಂದಿರು ಉಪಸ್ಥಿತರಿದ್ದರು.



