ರಾಯಚೂರು, ನ.11: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನವೆಂಬರ್ 14 ಮತ್ತು 15ರಂದು ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಎರಡು ದಿನಗಳ ಕಾಲ ಆಯೋಜಿಸಿರುವ 12ನೇ ರಾಯಚೂರು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರು, ಸಾಹಿತಿಗಳು, ಸಾಹಿತ್ಯಾಸಕ್ತರು ಹಾಗೂ ಕನ್ನಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸುವಂತೆ ಸ್ವಾಗತ ಸಮಿತಿ ಆತ್ಮೀಯವಾಗಿ ಆಹ್ವಾನಿಸಿದೆ.
ಕನ್ನಡ ನಾಡಿನ ಸಾಹಿತ್ಯ, ಭಾಷೆ, ಸಂಸ್ಕೃತಿ ಹಾಗೂ ಕಲೆಯ ಸಂರಕ್ಷಣೆ ಮತ್ತು ಪ್ರಸಾರದ ಉದ್ದೇಶದಿಂದ ಸಮ್ಮೇಳನವನ್ನು ಅರ್ಥಪೂರ್ಣವಾಗಿ ಆಯೋಜಿಸಲಾಗಿದೆ. ಜಿಲ್ಲೆಯ ಸಾಹಿತ್ಯಿಕ ಪರಂಪರೆ, ಸಾಂಸ್ಕೃತಿಕ ವೈಭವ ಹಾಗೂ ಕನ್ನಡದ ಹಿರಿಮೆಯನ್ನು ಸಾರುವ ವಿವಿಧ ಕಾರ್ಯಕ್ರಮಗಳು ಎರಡು ದಿನಗಳ ಕಾಲ ನಡೆಯಲಿವೆ.
ಸಮ್ಮೇಳನದ ಮೊದಲ ದಿನವಾದ ನವೆಂಬರ್ 14ರಂದು ಬೆಳಿಗ್ಗೆ ನಗರದ ಮಹಿಳಾ ಸಮಾಜದಿಂದ ಭವ್ಯ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಮೆರವಣಿಗೆ ಆರಂಭವಾಗಲಿದೆ. ಮೆರವಣಿಗೆಯು ಮಹಾನಗರ ಪಾಲಿಕೆ, ಕೇಂದ್ರ ಬಸ್ ನಿಲ್ದಾಣ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರವನ್ನು ತಲುಪಲಿದೆ.
ನಂತರ ಧ್ವಜಾರೋಹಣ, ಸಮ್ಮೇಳನದ ಉದ್ಘಾಟನೆ, ಗ್ರಂಥ ಪ್ರದರ್ಶನ, ವಿವಿಧ ಸಾಹಿತ್ಯಿಕ ಮತ್ತು ವಿಚಾರಗೋಷ್ಠಿಗಳು, ಕವಿಗೋಷ್ಠಿಗಳು ಸೇರಿದಂತೆ ಹಲವು ಕಾರ್ಯಕ್ರಮಗಳು ಜರುಗಲಿವೆ. ಇದೇ ಸಂದರ್ಭದಲ್ಲಿ ನಾಡಿನ ಹಿರಿಯ ಸಾಹಿತಿಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಗುವುದು.
ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲ ಆಜೀವ ಸದಸ್ಯರು, ಹಿರಿಯ ಸಾಹಿತಿಗಳು, ಕವಿಗಳು, ಲೇಖಕರು, ಸಾಹಿತ್ಯಾಸಕ್ತರು, ಕಲಾವಿದರು, ಕಲಾಭಿಮಾನಿಗಳು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಶಿಕ್ಷಕರು, ಉಪನ್ಯಾಸಕರು ಹಾಗೂ ಕನ್ನಡಾಭಿಮಾನಿಗಳು ಈ ಪತ್ರಿಕಾ ಪ್ರಕಟಣೆಯನ್ನೇ ಅಧಿಕೃತ ಆಹ್ವಾನವೆಂದು ಪರಿಗಣಿಸಿ ಸಮ್ಮೇಳನದಲ್ಲಿ ಭಾಗವಹಿಸಬೇಕು ಎಂದು ಸ್ವಾಗತ ಸಮಿತಿ ಮನವಿ ಮಾಡಿದೆ.
ಕನ್ನಡ ನಾಡು, ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ಮಹತ್ವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಈ ನುಡಿ ಹಬ್ಬದಲ್ಲಿ ಸಾರ್ವಜನಿಕರ ಸಕ್ರಿಯ ಪಾಲ್ಗೊಳ್ಳುವಿಕೆ ಅತ್ಯಂತ ಅಗತ್ಯವಾಗಿದೆ. ಜಿಲ್ಲೆಯ ಎಲ್ಲ ಕನ್ನಡಾಭಿಮಾನಿಗಳು ಒಗ್ಗಟ್ಟಿನಿಂದ ಭಾಗವಹಿಸುವ ಮೂಲಕ ಸಮ್ಮೇಳನದ ಯಶಸ್ಸಿಗೆ ಕೈಜೋಡಿಸಬೇಕು ಎಂದು ಕೋರಲಾಗಿದೆ.
‘ಬನ್ನಿ, ಕನ್ನಡದ ತೇರನ್ನು ಎಳೆಯೋಣ; ಕನ್ನಡ ನಾಡು, ನುಡಿ, ಸಾಹಿತ್ಯ ಮತ್ತು ಸಂಸ್ಕೃತಿಯ ವೈಭವವನ್ನು ಸಾರೋಣ’ ಎಂಬ ಆಶಯದೊಂದಿಗೆ ಸಮ್ಮೇಳನಕ್ಕೆ ಜಿಲ್ಲೆಯ ಸಮಸ್ತ ಕನ್ನಡಾಭಿಮಾನಿಗಳನ್ನು ಸ್ವಾಗತ ಸಮಿತಿ ಆಹ್ವಾನಿಸಿದೆ.



