ರಾಯಚೂರು: ಆಶಾ ಕಾರ್ಯಕರ್ತೆಯರಿಗೆ ಮಾಸಿಕ ₹15 ಸಾವಿರ ನಿಶ್ಚಿತ ಗೌರವಧನ ನೀಡುವುದು ಸೇರಿದಂತೆ ವಿವಿಧ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನವೆಂಬರ್ 17ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ರಾಜ್ಯಮಟ್ಟದ ಅನಿರ್ದಿಷ್ಟ ಅಹೋರಾತ್ರಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷ ಹಾಗೂ ಆಶಾ ಕಾರ್ಯಕರ್ತೆಯರ ಸಂಘಟನೆಯ ಜಿಲ್ಲಾ ಗೌರವಾಧ್ಯಕ್ಷ ವೀರೇಶ್ ಎನ್.ಎಸ್. ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ 17–18 ವರ್ಷಗಳಿಂದ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಬಡಜನರ ಮನೆಬಾಗಿಲಿಗೆ ಆರೋಗ್ಯ ಸೇವೆ ತಲುಪಿಸುವಲ್ಲಿ ಆಶಾ ಕಾರ್ಯಕರ್ತೆಯರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಕೊರೊನಾ ಸಂದರ್ಭದಲ್ಲಿ ಮುಂಚೂಣಿ ಕಾರ್ಯಕರ್ತೆಯರಾಗಿ ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ್ದಾರೆ. ಆದರೂ ಅವರ ದುಡಿಮೆಗೆ ತಕ್ಕ ಗೌರವಧನ ಮತ್ತು ಆರ್ಥಿಕ ಭದ್ರತೆ ದೊರೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆಶಾ ಕಾರ್ಯಕರ್ತೆಯರಿಗೆ ಕೆಲಸದ ಸಮಯ, ರಜೆ ಹಾಗೂ ಹಬ್ಬಗಳೆಂಬ ಮಿತಿಯಿಲ್ಲ. ಆದರೆ ಗೌರವಧನ ಮಾತ್ರ ಅತ್ಯಂತ ಕಡಿಮೆಯಾಗಿದೆ. ಪ್ರೋತ್ಸಾಹಧನ ಮೂರು–ನಾಲ್ಕು ತಿಂಗಳಿಗೊಮ್ಮೆ ಪಾವತಿಯಾಗುತ್ತಿದ್ದು, ಹಲವು ಕೆಲಸಗಳ ಹಣ ಬಾಕಿ ಉಳಿದಿದೆ. ಇದರಿಂದ ಕುಟುಂಬ ನಿರ್ವಹಣೆ ಹಾಗೂ ಮಕ್ಕಳ ಶಿಕ್ಷಣದ ವೆಚ್ಚ ಭರಿಸುವುದು ಕಷ್ಟಕರವಾಗಿದೆ ಎಂದರು.
ಕಳೆದ ಒಂಬತ್ತು ವರ್ಷಗಳಲ್ಲಿ ರಾಜ್ಯ ಸರ್ಕಾರ ಆಶಾ ಕಾರ್ಯಕರ್ತೆಯರ ಗೌರವಧನವನ್ನು ಕೇವಲ ₹1,500 ಹೆಚ್ಚಿಸಿದೆ. ಕೇರಳ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಹೆಚ್ಚಿನ ಗೌರವಧನ ನೀಡಲಾಗುತ್ತಿದೆ. ಕರ್ನಾಟಕದಲ್ಲಿಯೂ ಕನಿಷ್ಠ ₹15 ಸಾವಿರ ನಿಶ್ಚಿತ ಗೌರವಧನ ನೀಡಬೇಕು. ಈ ಹಿಂದೆ ಘೋಷಿಸಿದ್ದ ₹10 ಸಾವಿರ ಗೌರವಧನದ ಭರವಸೆಯೂ ಈಡೇರಿಲ್ಲ ಎಂದು ಆರೋಪಿಸಿದರು.
ಮಹಿಳೆಯರಿಗೆ ನೀಡುವ ಗ್ಯಾರಂಟಿ ಯೋಜನೆಯ ಹಣವನ್ನು ಆಶಾ ಕಾರ್ಯಕರ್ತೆಯರ ಗೌರವಧನದೊಂದಿಗೆ ಹೋಲಿಸುವುದು ಸರಿಯಲ್ಲ. ಗ್ಯಾರಂಟಿ ಸೌಲಭ್ಯಕ್ಕೂ ಆಶಾ ಕಾರ್ಯಕರ್ತೆಯರ ದುಡಿಮೆಯ ಪ್ರತಿಫಲಕ್ಕೂ ಸಂಬಂಧವಿಲ್ಲ. ಅವರ ಸೇವೆಗೆ ತಕ್ಕ ಗೌರವಧನ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಸಮಸ್ತ ಆ್ಯಪ್ ಮೂಲಕ ಕಡ್ಡಾಯವಾಗಿ ಮೊಬೈಲ್ ಕೆಲಸ ಮಾಡಿಸುವುದನ್ನು ಕೈಬಿಡಬೇಕು ಅಥವಾ ಮೊಬೈಲ್ ಹಾಗೂ ಹೆಚ್ಚುವರಿ ಪ್ರೋತ್ಸಾಹಧನ ನೀಡಬೇಕು. ಬಾಕಿ ಇರುವ ಕೇಂದ್ರದ ಪ್ರೋತ್ಸಾಹಧನ ಮತ್ತು ನಿವೃತ್ತಿ ಇಡಿಗಂಟು ಪಾವತಿಸಬೇಕು. ಆಶಾ ಸುಗಮಕಾರರ ಸೇವೆಯನ್ನು ಸೂಕ್ತ ವೇತನದೊಂದಿಗೆ ಮುಂದುವರಿಸಬೇಕು. 2024–25ನೇ ಸಾಲಿನ ಮಾಸಿಕ ₹1,500 ಹೆಚ್ಚಳದ ಬಾಕಿ ಹಣ ಬಿಡುಗಡೆಗೊಳಿಸಬೇಕು. ನಿವೃತ್ತಿ ಸೌಲಭ್ಯವನ್ನು ₹5 ಲಕ್ಷಕ್ಕೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರ ನಿರಂತರವಾಗಿ ನೀಡುತ್ತಿರುವ ಭರವಸೆಗಳು ಈಡೇರದ ಹಿನ್ನೆಲೆಯಲ್ಲಿ ಅನಿರ್ದಿಷ್ಟ ಹೋರಾಟ ಅನಿವಾರ್ಯವಾಗಿದೆ. ರಾಜ್ಯದ ಆಶಾ ಕಾರ್ಯಕರ್ತೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಹೋರಾಟ ಯಶಸ್ವಿಗೊಳಿಸಬೇಕು. ಸಾರ್ವಜನಿಕರೂ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಆಶಾ ಸಂಘಟನೆಯ ಜಿಲ್ಲಾಧ್ಯಕ್ಷೆ ಗೌರಮ್ಮ, ಜಿಲ್ಲಾ ಕಾರ್ಯದರ್ಶಿ ಶೋಭಾ, ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಮಹೇಶ್, ಅಣ್ಣಪ್ಪ ಶಿರಶ್ಯಾಡ್ ಹಾಗೂ ನಗರ ಕಾರ್ಯದರ್ಶಿ ವಿಮಲಾ ಉಪಸ್ಥಿತರಿದ್ದರು.



