ದೇವದುರ್ಗ: ಯುವಜನತೆ ಹಾಗೂ ಮಹಿಳೆಯರು ವೀರವನಿತೆ ಒನಕೆ ಓಬವ್ವ ಅವರ ಅಸಾಧಾರಣ ಸಾಹಸ, ದೇಶಪ್ರೇಮ, ಧೈರ್ಯ ಮತ್ತು ಸ್ವಾಭಿಮಾನದ ಆದರ್ಶಗಳನ್ನು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಾಲೂಕು ತಹಶೀಲ್ದಾರ್ ನಾಗಮ್ಮ ಕಟ್ಟಿಮನಿ ಕರೆ ನೀಡಿದರು.
ಪಟ್ಟಣದ ವೀರವನಿತೆ ಒನಕೆ ಓಬವ್ವ ವೃತ್ತದಲ್ಲಿ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ಬಳಿಕ ಮಾತನಾಡಿದರು.
ಭಾರತೀಯ ಇತಿಹಾಸದಲ್ಲಿ ಅಪ್ರತಿಮ ಶೌರ್ಯ ಹಾಗೂ ದೇಶಭಕ್ತಿಗೆ ಹೆಸರಾದ ಚಿತ್ರದುರ್ಗದ ಒನಕೆ ಓಬವ್ವ ಅವರ ಸಾಹಸಗಾಥೆ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕವಾಗಿದೆ. ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಮಹಿಳೆಯೊಬ್ಬರು ಸಂಕಷ್ಟದ ಸಂದರ್ಭದಲ್ಲಿ ಅಸಾಮಾನ್ಯ ಧೈರ್ಯ ಪ್ರದರ್ಶಿಸಿ ನಾಡಿನ ರಕ್ಷಣೆಗೆ ಮುಂದಾದ ಘಟನೆ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದಿದೆ ಎಂದು ಹೇಳಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚನೆಯಾದ ಸಂವಿಧಾನವು ಮಹಿಳೆಯರಿಗೆ ಸಮಾನತೆ, ಸ್ವಾತಂತ್ರ್ಯ ಹಾಗೂ ಅವಕಾಶಗಳನ್ನು ಕಲ್ಪಿಸಿಕೊಟ್ಟಿದೆ. ಸಂವಿಧಾನ ನೀಡಿರುವ ಹಕ್ಕುಗಳು ಮತ್ತು ಅವಕಾಶಗಳನ್ನು ಬಳಸಿಕೊಂಡು ಮಹಿಳೆಯರು ಇಂದು ಶಿಕ್ಷಣ, ಆಡಳಿತ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸುತ್ತಿದ್ದಾರೆ. 'ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ' ಎಂಬ ಮಾತಿನಂತೆ ಮಹಿಳೆಯರ ಶಿಕ್ಷಣ ಮತ್ತು ಸಬಲೀಕರಣವು ಸಮಾಜದ ಪ್ರಗತಿಗೆ ಅತ್ಯಂತ ಅಗತ್ಯವಾಗಿದೆ ಎಂದು ತಿಳಿಸಿದರು.
ಚಿತ್ರದುರ್ಗದ ಕೋಟೆಯು ಕೇವಲ ಕಲ್ಲುಗಳಿಂದ ನಿರ್ಮಿತವಾದ ಕೋಟೆಯಲ್ಲ, ಅದು ನಾಡಿನ ಸ್ವಾಭಿಮಾನ ಹಾಗೂ ಶೌರ್ಯದ ಸಂಕೇತವಾಗಿದೆ. ಆ ಕೋಟೆಯ ಕಾವಲುಗಾರ ಮುದ್ದಹನುಮಪ್ಪ ಅವರ ಪತ್ನಿಯಾಗಿದ್ದ ಒನಕೆ ಓಬವ್ವ ಸಾಮಾನ್ಯ ಗೃಹಿಣಿಯಾಗಿದ್ದರೂ, ನಾಡಿಗೆ ಆಪತ್ತು ಎದುರಾದ ಸಂದರ್ಭದಲ್ಲಿ ಅಪ್ರತಿಮ ಸಾಹಸ ಮೆರೆದರು ಎಂದು ಬಣ್ಣಿಸಿದರು.
ಹೈದರಾಲಿಯ ಸೈನಿಕರು ಚಿತ್ರದುರ್ಗದ ಕೋಟೆಯ ರಹಸ್ಯ ಕಿಂಡಿಯ ಮೂಲಕ ಒಳನುಗ್ಗಲು ಪ್ರಯತ್ನಿಸುತ್ತಿದ್ದಾಗ, ನೀರು ತರಲು ತೆರಳಿದ್ದ ಓಬವ್ವ ಇದನ್ನು ಗಮನಿಸಿದರು. ಊಟ ಮಾಡುತ್ತಿದ್ದ ಪತಿಗೆ ತೊಂದರೆ ನೀಡದೆ, ಕೈಯಲ್ಲಿದ್ದ ಒನಕೆಯನ್ನೇ ಆಯುಧವನ್ನಾಗಿ ಮಾಡಿಕೊಂಡು ಕೋಟೆಯೊಳಗೆ ಪ್ರವೇಶಿಸುತ್ತಿದ್ದ ಶತ್ರು ಸೈನಿಕರನ್ನು ಒಬ್ಬೊಬ್ಬರಾಗಿ ಹೊಡೆದುರುಳಿಸಿದರು. ತಮ್ಮ ಪ್ರಾಣವನ್ನೂ ಲೆಕ್ಕಿಸದೆ ನಾಡಿನ ರಕ್ಷಣೆಗೆ ಮುಂದಾದ ಅವರ ಧೈರ್ಯ ಮತ್ತು ಸಮಯಪ್ರಜ್ಞೆ ಇಂದಿನ ಮಹಿಳೆಯರಿಗೆ ಮಾದರಿಯಾಗಿದೆ ಎಂದು ಹೇಳಿದರು.
ಒನಕೆ ಓಬವ್ವ ಅವರ ಸಾಹಸವು ಮಹಿಳೆಯರ ಆತ್ಮಬಲ, ಸ್ವಾಭಿಮಾನ ಮತ್ತು ಹೋರಾಟದ ಮನೋಭಾವಕ್ಕೆ ಪ್ರತೀಕವಾಗಿದೆ. ಇಂದಿನ ಯುವಜನತೆ ಅವರ ಜೀವನಚರಿತ್ರೆಯನ್ನು ಅರಿತುಕೊಂಡು ದೇಶಪ್ರೇಮ, ಸಾಮಾಜಿಕ ಜವಾಬ್ದಾರಿ ಹಾಗೂ ಧೈರ್ಯದ ಗುಣಗಳನ್ನು ಬೆಳೆಸಿಕೊಳ್ಳಬೇಕು. ಮಹಿಳೆಯರು ಯಾವುದೇ ಸಂಕಷ್ಟದ ಸಂದರ್ಭದಲ್ಲಿಯೂ ಎದೆಗುಂದದೆ ಆತ್ಮವಿಶ್ವಾಸದಿಂದ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮುಖಂಡ ಷಣ್ಮುಖ ಹೂಗಾರ ಮಾತನಾಡಿ, ಒನಕೆ ಓಬವ್ವ ಅವರ ಶೌರ್ಯ, ತ್ಯಾಗ ಮತ್ತು ದೇಶಭಕ್ತಿಯ ಆದರ್ಶಗಳನ್ನು ಸ್ಮರಿಸಿದರು. ಇಂತಹ ಮಹನೀಯರ ಜಯಂತಿ ಆಚರಣೆಗಳು ಅವರ ಜೀವನ ಸಂದೇಶವನ್ನು ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಹಿರಿಯ ಬೌದ್ಧ ಉಪಾಸಕ ಮಲ್ಲೇಶಪ್ಪ ಹುನಗುಂದಬಾಡ ಅವರು ತ್ರಿಶರಣ ಮತ್ತು ಪಂಚಶೀಲ ಪಠಣ ಮಾಡಿದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣಾಧಿಕಾರಿ ರಾಜಕುಮಾರ ಡೊಣಿ, ಸಿಪಿಐ ಮಂಜುನಾಥ್, ಶಿವರಾಜ ಪೂಜಾರಿ, ಶ್ರೀನಿವಾಸ ನಾಯಕ, ಭೀಮರಾಯ ಮೇಟಿ, ಗಂಗಾಧರ, ರವಿ ಸುರಪೂರ, ದೈಹಿಕ ಶಿಕ್ಷಕ ಬಾಲಪ್ಪ, ಪ್ರವೀಣ, ರಾಘವೇಂದ್ರ, ಭಾಗಪ್ಪ ಹುಜರಾತಿ ಹಾಗೂ ಮುಖಂಡರಾದ ಹನುಮಂತ ಮನ್ನಾಪೂರು, ಮಹಾಂತೇಶ ಭವಾನಿ, ಮಾನಪ್ಪ ಮೇಸ್ತ್ರಿ, ಹುಸೇನಪ್ಪ ಜಾಲಹಳ್ಳಿ, ವಿಶ್ವನಾಥ ಬಲ್ಲಿದವ, ಹನುಮಂತ ದೊರೆ, ಮಲ್ಲಿಕಾರ್ಜುನ ಕೊತ್ತದೊಡ್ಡಿ, ಯಲ್ಲಪ್ಪ ಗಚ್ಚಿನಮನಿ ಜಾಲಹಳ್ಳಿ, ಮಲ್ಲಿಕಾರ್ಜುನ ಬೊಮ್ಮನಾಳ, ಶಿವಕುಮಾರ ಚಲುವಾದಿ ಸೇರಿದಂತೆ ಗಣ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.



