ರಾಯಚೂರು, ನ.11: ಇಂಗ್ಲಿಷ್ ಕವಿ ವಿಲಿಯಂ ವರ್ಡ್ಸ್‌ವರ್ತ್ ಅವರಿಗೆ ನಿಸರ್ಗವು ಜೀವಂತವಾಗಿ ನಡೆದಾಡುವ ದೇವರಂತೆ ಕಾಣುತ್ತಿತ್ತು. ಅವರು ನಿಸರ್ಗವನ್ನು ಶಿಕ್ಷಕನಂತೆ ಪರಿಗಣಿಸಿದ್ದು, ಪ್ರಕೃತಿಯೊಂದಿಗೆ ಹೆಚ್ಚಿನ ಸಮಯ ಕಳೆಯುತ್ತಿದ್ದರು ಎಂದು ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ಹಾಗೂ ಇಂಗ್ಲಿಷ್ ಮತ್ತು ವಿದೇಶಿ ಭಾಷೆಗಳ ವಿಭಾಗದ ಮುಖ್ಯಸ್ಥ ಪ್ರೊ. ಬಸವರಾಜ ಪಿ. ಡೋಣೂರು ಹೇಳಿದರು.

ನಗರದ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗ ಹಾಗೂ ಇಂಗ್ಲಿಷ್ ಲಿಟರರಿ ಕ್ಲಬ್ ವತಿಯಿಂದ ಆಯೋಜಿಸಿದ್ದ ‘ರಿವಿಸಿಟಿಂಗ್ ರೊಮ್ಯಾಂಟಿಸಿಸಂ: ಕಂಟೆಂಪರರಿ ಇಂಟರ್‌ಪ್ರಿಟೇಶನ್ ಆಫ್ ಬ್ರಿಟಿಷ್ ರೊಮ್ಯಾಂಟಿಕ್ ಪೊಯಟ್ರಿ’ ಎಂಬ ವಿಷಯದ ಕುರಿತ ಒಂದು ದಿನದ ವಿಚಾರ ಸಂಕಿರಣವನ್ನು ಇಂಗ್ಲಿಷ್ ಉಪನ್ಯಾಸಕ ಅನಿಲ್ ಅಪ್ರಾಳ್ ಅವರು ಪ್ರಕಟಿಸಿರುವ ‘ಅಕಾಡೆಮಿಕ್ ಇಂಗ್ಲಿಷ್’ ಪುಸ್ತಕವನ್ನು ಲೋಕಾರ್ಪಣೆ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ವರ್ಡ್ಸ್‌ವರ್ತ್ ಅವರ ಸಾಹಿತ್ಯ ಕೃತಿಗಳು ಜೀವನದ ವಿವಿಧ ಆಯಾಮಗಳನ್ನು ಪ್ರತಿಬಿಂಬಿಸುತ್ತವೆ. ಕಾವ್ಯವೆಂದರೆ ತೀವ್ರವಾದ ಭಾವನೆಗಳ ಸ್ವಯಂಪ್ರೇರಿತ ಉಕ್ಕುವಿಕೆ. ಅದು ಪ್ರಶಾಂತತೆಯಲ್ಲಿ ನೆನಪಿಸಿಕೊಳ್ಳುವ ಭಾವನೆಗಳಿಂದ ಉದ್ಭವಿಸುತ್ತದೆ ಎಂಬ ವರ್ಡ್ಸ್‌ವರ್ತ್ ಅವರ ಕಾವ್ಯ ವ್ಯಾಖ್ಯಾನವನ್ನು ವಿಶ್ಲೇಷಿಸಿದರು.

ಇಂದು ನಾವು ಮೋಸಗಳಿಂದ ಕೂಡಿದ ಜಗತ್ತಿನಲ್ಲಿ ಬದುಕುತ್ತಿದ್ದೇವೆ. ಪ್ರಕೃತಿಯನ್ನು ಪ್ರೀತಿಸುವುದರಿಂದ ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ದುರಂತ ಹಾಗೂ ಹಾಸ್ಯ ನಾಟಕಗಳನ್ನು ವೀಕ್ಷಿಸಬೇಕು. ಸಾಹಿತ್ಯದ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡು ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶಿವಾನಂದ ಕೆಳಗಿನಮನಿ ಮಾತನಾಡಿ, ಇಂಗ್ಲಿಷ್ ಮತ್ತು ಕನ್ನಡ ಸಾಹಿತ್ಯದ ನಡುವಿನ ಸಂಬಂಧ ಅತ್ಯಂತ ಆಳವಾದದ್ದು ಹಾಗೂ ಪ್ರಭಾವಶಾಲಿಯಾಗಿದೆ. ವರ್ಡ್ಸ್‌ವರ್ತ್, ಕೀಟ್ಸ್, ಶೆಲ್ಲಿ ಮತ್ತು ಬೈರನ್ ಅವರಂತಹ ಕವಿಗಳ ಕಾವ್ಯಶೈಲಿಯಿಂದ ಪ್ರಭಾವಿತರಾಗಿ ಕನ್ನಡದಲ್ಲಿಯೂ ವೈಯಕ್ತಿಕ ಅನುಭವ, ಪ್ರಕೃತಿಪ್ರೀತಿ ಹಾಗೂ ಭಾವನೆಗಳಿಗೆ ಹೆಚ್ಚಿನ ಒತ್ತು ನೀಡುವ ಭಾವಗೀತೆಗಳು ರಚನೆಯಾದವು ಎಂದು ತಿಳಿಸಿದರು.

ಬಿ.ಎಂ. ಶ್ರೀಕಂಠಯ್ಯ ಅವರ ‘ಇಂಗ್ಲಿಷ್ ಗೀತೆಗಳು’ ಕೃತಿಯು ಇದಕ್ಕೆ ನಾಂದಿಯಾಯಿತು. ಇಂಗ್ಲಿಷ್ ಸಾಹಿತ್ಯದ ಮೂಲಕ ಕನ್ನಡ ಕವಿಗಳಿಗೆ ಪಾಶ್ಚಿಮಾತ್ಯ ಮಾನವತಾವಾದ, ತಾರ್ಕಿಕ ಚಿಂತನೆ ಹಾಗೂ ಸಾಮಾಜಿಕ ಸುಧಾರಣೆಯ ಆಲೋಚನೆಗಳು ಪರಿಚಯವಾದವು ಎಂದು ಹೇಳಿದರು.

ಸಾಹಿತ್ಯದ ಅಧ್ಯಯನ ಅತ್ಯಂತ ಅಗತ್ಯವಾಗಿದೆ. ವಿದ್ಯಾರ್ಥಿಗಳು ಸಾಹಿತ್ಯಕ್ಕೆ ಸಂಬಂಧಿಸಿದ ಪುಸ್ತಕಗಳು, ನಾಟಕಗಳು, ಕಾವ್ಯಗಳು ಹಾಗೂ ಕಾದಂಬರಿಗಳನ್ನು ಹೆಚ್ಚು ಹೆಚ್ಚು ಓದಿ ತಿಳಿದುಕೊಳ್ಳಬೇಕು. ಸಮಾಜ, ಸಂಸ್ಕೃತಿ ಹಾಗೂ ರಾಜಕೀಯ ವ್ಯವಸ್ಥೆಯನ್ನು ಸಾಹಿತಿಗಳು ತಮ್ಮ ಕೃತಿಗಳಲ್ಲಿ ಹೇಗೆ ಚಿತ್ರಿಸಿದ್ದಾರೆ ಎಂಬುದನ್ನು ಸಾಹಿತ್ಯದ ಮೂಲಕ ಅರಿತುಕೊಳ್ಳಬಹುದು. ಸಾಹಿತ್ಯದಲ್ಲಿನ ವೈವಿಧ್ಯತೆ ಮತ್ತು ವೈಶಿಷ್ಟ್ಯಗಳು ನಮ್ಮ ಜೀವನದಲ್ಲಿ ಸಾಕಷ್ಟು ಸಕಾರಾತ್ಮಕ ಬದಲಾವಣೆಗಳನ್ನು ತರಬಲ್ಲವು ಎಂದು ಅಭಿಪ್ರಾಯಪಟ್ಟರು.

ಮೊದಲ ಗೋಷ್ಠಿಯಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಎನ್.ಎಚ್. ಕಲ್ಲೂರು ಅವರು ಪಿ.ಬಿ. ಶೆಲ್ಲಿ ಅವರ ಕುರಿತು ಮಾತನಾಡಿ, ತೀವ್ರವಾದ ಭಾವನೆಗಳು, ಕಲ್ಪನಾವಿಲಾಸ, ಪ್ರಕೃತಿಪ್ರೇಮ ಹಾಗೂ ಅಮೂಲಾಗ್ರ ರಾಜಕೀಯ ಮತ್ತು ಸಾಮಾಜಿಕ ಆದರ್ಶಗಳು ಶೆಲ್ಲಿ ಅವರ ಕಾವ್ಯದ ಪ್ರಮುಖ ಲಕ್ಷಣಗಳಾಗಿವೆ ಎಂದು ತಿಳಿಸಿದರು.

ಶೆಲ್ಲಿ ಅವರ ‘ಓಜಿಮ್ಯಾಂಡಿಯಾಸ್’, ‘ಓಡ್ ಟು ದ ವೆಸ್ಟ್ ವಿಂಡ್’ ಹಾಗೂ ‘ಟು ಎ ಸ್ಕೈಲಾರ್ಕ್’ ಕವಿತೆಗಳನ್ನು ವಿಶ್ಲೇಷಿಸಿ, ಅವುಗಳಲ್ಲಿರುವ ಭಾವನಾತ್ಮಕತೆ, ಪ್ರಕೃತಿಯ ಚಿತ್ರಣ ಹಾಗೂ ಸಾಮಾಜಿಕ ಚಿಂತನೆಗಳನ್ನು ವಿವರಿಸಿದರು.

ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಆಶೀಷ್ ಬೆಲ್ಮಕರ್ ಅವರು ವಿಲಿಯಂ ವರ್ಡ್ಸ್‌ವರ್ತ್ ಅವರ ಕುರಿತು ಮಾತನಾಡಿ, ಪ್ರಕೃತಿಯು ಮನುಷ್ಯನಿಗೆ ಅತ್ಯುತ್ತಮ ಶಿಕ್ಷಕ, ಮಾರ್ಗದರ್ಶಕ ಹಾಗೂ ಸಾಂತ್ವನ ನೀಡುವ ಗೆಳೆಯ ಎಂದು ವರ್ಡ್ಸ್‌ವರ್ತ್ ನಂಬಿದ್ದರು. ಅವರು ಸಾಮಾನ್ಯ ಜನರ ಜೀವನವನ್ನು ತಮ್ಮ ಕಾವ್ಯದ ವಸ್ತುವನ್ನಾಗಿ ಮಾಡಿಕೊಂಡಿದ್ದರು. ಕಾವ್ಯದ ಭಾಷೆಯು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ಸರಳವಾಗಿರಬೇಕು ಎಂದು ಪ್ರತಿಪಾದಿಸಿದ್ದರು ಎಂದರು.

ವರ್ಡ್ಸ್‌ವರ್ತ್ ತಮ್ಮ ಕಾವ್ಯಗಳಲ್ಲಿ ಮನುಷ್ಯನ ಅಂತರಂಗ ಮತ್ತು ಪ್ರಕೃತಿಯ ನಡುವಿನ ಅವಿನಾಭಾವ ಸಂಬಂಧವನ್ನು ಸುಂದರವಾಗಿ ಚಿತ್ರಿಸಿದ್ದಾರೆ ಎಂದು ವಿವರಿಸಿದರು.

ಎರಡನೇ ಗೋಷ್ಠಿಯಲ್ಲಿ ದಾವಣಗೆರೆ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಎಸ್. ಯಜ್ಞಶ್ರೀ ಅವರು ಜಾನ್ ಕೀಟ್ಸ್ ಅವರ ಕುರಿತು ಮಾತನಾಡಿ, ಭಾವನಾತ್ಮಕ ತೀವ್ರತೆಗೆ ಹೆಸರಾದ ಜಾನ್ ಕೀಟ್ಸ್ ಅವರ ಕಾವ್ಯ ಸಾಹಿತ್ಯವು ಜಗತ್ಪ್ರಸಿದ್ಧವಾಗಿದೆ. ಕೇವಲ 25 ವರ್ಷಗಳ ಅಲ್ಪಾಯುಷ್ಯದಲ್ಲಿಯೇ ಅವರು ಸೃಷ್ಟಿಸಿದ ಸಾಹಿತ್ಯ ಇಂದಿಗೂ ಅಮರವಾಗಿದೆ. ಅವರಿಗೆ ಸೌಂದರ್ಯವೇ ಪರಮ ಸತ್ಯವಾಗಿತ್ತು ಎಂದು ತಿಳಿಸಿದರು.

ಯಾವುದೇ ಒಂದು ವಿಷಯದ ಬಗ್ಗೆ ತಕ್ಷಣ ತೀರ್ಪು ನೀಡದೆ, ಸಂದೇಹಗಳ ನಡುವೆಯೂ ಕಾವ್ಯವನ್ನು ಕಾವ್ಯವಾಗಿಯೇ ಆಸ್ವಾದಿಸುವ ವಿಶಿಷ್ಟ ಗುಣವನ್ನು ಕೀಟ್ಸ್ ಪ್ರತಿಪಾದಿಸಿದ್ದರು. ಅವರ ಕಾವ್ಯಗಳಲ್ಲಿ ದೃಶ್ಯ ಮತ್ತು ಭಾವನೆಗಳ ಶ್ರೀಮಂತಿಕೆ ಕಂಡುಬರುತ್ತದೆ ಎಂದು ವಿಶ್ಲೇಷಿಸಿದರು.

ವೇದಿಕೆಯಲ್ಲಿ ವಿಶ್ವವಿದ್ಯಾಲಯದ ಉಪಕುಲಸಚಿವ ಡಾ. ಕೆ. ವೆಂಕಟೇಶ, ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಪ್ರೊ. ಪಾರ್ವತಿ ಸಿ.ಎಸ್., ವಾಣಿಜ್ಯ ನಿಕಾಯದ ಡೀನ್ ಪ್ರೊ. ಪಿ. ಭಾಸ್ಕರ್ ಉಪಸ್ಥಿತರಿದ್ದರು. ಅನಿಲ್ ಅಪ್ರಾಳ್, ಡಾ. ಮೊಹಮ್ಮದ್ ಆಸೀಫ್ ಹಾಗೂ ಫಾತೀಮಾ ಪರ್ವೀನ್ ಭಾಗವಹಿಸಿದ್ದರು.

ಇಂಗ್ಲಿಷ್ ವಿಭಾಗದ ಸಂಯೋಜಕ ಡಾ. ಆನಂದ ಜೆ. ಯರಗೇರಾ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ಗಂಗಮ್ಮ ಸಂಗಡಿಗರು ಪ್ರಾರ್ಥಿಸಿದರು. ಪ್ರಸಾದ್ ಸ್ವಾಗತಿಸಿದರು. ಬಸಮ್ಮ ಹಾಗೂ ನಾಗರಾಜ್ ಬಿಲ್ಲಾ ಕಾರ್ಯಕ್ರಮ ನಿರೂಪಿಸಿದರು. ಪೂಜಾ, ರಾಜಶೇಖರ್, ಗೌರಮ್ಮ, ಶ್ರೀಹರಿರೆಡ್ಡಿ, ಶ್ರೀದೇವಿ ಹಾಗೂ ಹುಲಿಗೆಮ್ಮ ಅತಿಥಿಗಳನ್ನು ಪರಿಚಯಿಸಿದರು. ಜಯಶ್ರೀ ವಂದಿಸಿದರು.

ವಿವಿಧ ವಿಭಾಗಗಳ ಅತಿಥಿ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.