ಮಾನ್ವಿ: ತಾಲೂಕಿನ ನಸಲಾಪುರ ಗ್ರಾಮದ ಇಬ್ರಾಹಿಂ ಕಾಲೋನಿಯಲ್ಲಿ ಟಿಪ್ಪು ಸುಲ್ತಾನ್ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಜಯಂತಿಯ ಅಂಗವಾಗಿ ಆಯೋಜಿಸಿದ್ದ ಎನ್‌ಪಿಎಲ್ ಸೀಸನ್-4 ಕ್ರಿಕೆಟ್ ಟೂರ್ನಿಯ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು.

ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಎನ್‌ಎಸ್‌ಪಿ ಟೈಗರ್ಸ್ ತಂಡ ಪ್ರಥಮ ಸ್ಥಾನ ಪಡೆದರೆ, ಸುಲ್ತಾನ್ ವಾರಿಯರ್ಸ್ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಇತರ ತಂಡಗಳ ಆಟಗಾರರೂ ಉತ್ತಮ ಕ್ರೀಡಾ ಮನೋಭಾವದಿಂದ ಆಟವಾಡಿ ಪ್ರಶಂಸೆಗೆ ಪಾತ್ರರಾದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅಮರೇಶ ನಾಯಕ, ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ಶೌರ್ಯದಿಂದ ಹೋರಾಡಿದ ಮಹಾನ್ ದೇಶಭಕ್ತರಲ್ಲಿ ಒಬ್ಬರಾಗಿದ್ದಾರೆ. ಅವರ ಧೈರ್ಯ, ದೇಶಪ್ರೇಮ ಹಾಗೂ ತ್ಯಾಗಮಯ ಜೀವನ ಯುವಜನತೆಗೆ ಸದಾ ಸ್ಫೂರ್ತಿದಾಯಕವಾಗಿದೆ ಎಂದು ಹೇಳಿದರು.

ಕ್ರೀಡೆ ಯುವಕರಲ್ಲಿ ಶಿಸ್ತು, ಆರೋಗ್ಯ, ಸ್ನೇಹಭಾವ, ಏಕತೆ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುತ್ತದೆ. ಗೆಲುವು ಮತ್ತು ಸೋಲು ಜೀವನದ ಅವಿಭಾಜ್ಯ ಅಂಗಗಳಾಗಿದ್ದು, ಪ್ರತಿಯೊಬ್ಬ ಆಟಗಾರನೂ ಎರಡನ್ನೂ ಸಮಾನ ಮನೋಭಾವದಿಂದ ಸ್ವೀಕರಿಸಬೇಕು. ಕ್ರೀಡಾಪಟುಗಳು ಪರಸ್ಪರ ಗೌರವ ಮತ್ತು ಸೌಹಾರ್ದತೆಯಿಂದ ಉತ್ತಮ ಕ್ರೀಡಾ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಇಂತಹ ಕ್ರೀಡಾಕೂಟಗಳು ಗ್ರಾಮೀಣ ಭಾಗದ ಯುವಕರಲ್ಲಿರುವ ಪ್ರತಿಭೆಯನ್ನು ಗುರುತಿಸಲು ಹಾಗೂ ಅವರಲ್ಲಿ ಒಗ್ಗಟ್ಟು ಮತ್ತು ಸಹಕಾರ ಮನೋಭಾವವನ್ನು ಬೆಳೆಸಲು ಉತ್ತಮ ವೇದಿಕೆಯಾಗಿವೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ರುಕ್ಮದ್ದೀನ್, ಹೋಟೆಲ್ ಬಂದೇನವಾಜ್, ಎಸ್‌ಡಿಎಂಸಿ ಅಧ್ಯಕ್ಷ ಬಂದೇನವಾಜ್ ಎಂ., ಈರಣ್ಣ, ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣಯ್ಯ ನಾಯಕ, ರಂಜಾನ್ ಪಟೇಲ್, ರಮೇಶ್ ಪಿಗ್ಮಿ, ಅಬ್ಬಾಸ್, ಖಾಸಿಂ ಸಾಬ್, ಸತ್ತಾರ ಸಾಬ್ ಪಾಟೀಲ್, ನಬಿಸಾಬ್, ಸಲೀಮ್ ಪೊಲೀಸ್, ತಾಯಣ್ಣ ನಾಯಕ, ಗಂಗೂ ನಾಯಕ, ತಿಮ್ಮ, ಮೈನು ಹಾಜಿ, ಅಪ್ಸರ, ಅಮೀದ್, ಮೌನದ್ದೀನ್ ಡಿಜೆ ಸೇರಿದಂತೆ ಗ್ರಾಮದ ಮುಖಂಡರು, ಕ್ರೀಡಾಭಿಮಾನಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.