ಮಂತ್ರಾಲಯ: ದೀಪಾವಳಿ ಹಬ್ಬದ ಬಲಿಪಾಡ್ಯಮಿಯ ಪವಿತ್ರ ದಿನದ ಅಂಗವಾಗಿ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಶ್ರೀ ಬ್ರಹ್ಮಕರಾರ್ಚಿತ ಶ್ರೀ ಮೂಲರಾಮದೇವರು ಸೇರಿದಂತೆ ಶ್ರೀಮಠದ ಸಂಸ್ಥಾನ ಪ್ರತಿಮೆಗಳಿಗೆ ವಿಧಿವಿಧಾನಗಳೊಂದಿಗೆ ಮಹಾಭಿಷೇಕ ನೆರವೇರಿಸಿದರು.
ಬಲಿಪಾಡ್ಯಮಿಯ ವಿಶೇಷ ಧಾರ್ಮಿಕ ಆಚರಣೆಯ ಅಂಗವಾಗಿ ಶ್ರೀಮಠದಲ್ಲಿ ಭಕ್ತಿಭಾವದಿಂದ ಪೂಜಾ ಕೈಂಕರ್ಯಗಳನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ಶ್ರೀ ಮೂಲರಾಮದೇವರು ಹಾಗೂ ಇತರ ಸಂಸ್ಥಾನ ಪ್ರತಿಮೆಗಳಿಗೆ ಮಹಾಭಿಷೇಕ ನೆರವೇರಿಸಿ, ಲೋಕಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಮಹಾಭಿಷೇಕದ ನಂತರ ಶ್ರೀ ಮೂಲರಾಮದೇವರು, ಶ್ರೀ ದಿಗ್ವಿಜಯ ರಾಮದೇವರು ಹಾಗೂ ಶ್ರೀ ಜಯರಾಮದೇವರಿಗೆ ಪವಿತ್ರ ಗಂಧಲೇಪನ ನೆರವೇರಿಸಲಾಯಿತು. ಬಳಿಕ ಶ್ರೀಪಾದಂಗಳವರು ಶ್ರೀಮಠದ ಸಂಪ್ರದಾಯದಂತೆ ಸಂಸ್ಥಾನ ಪೂಜೆಯನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಿದರು.
ಶ್ರೀಮಠದಲ್ಲಿ ಮಹಾಭಿಷೇಕಕ್ಕೆ ವಿಶೇಷ ಧಾರ್ಮಿಕ ಮಹತ್ವವಿದ್ದು, ವರ್ಷದಲ್ಲಿ ಕೇವಲ ಎರಡು ಬಾರಿ ಮಾತ್ರ ಈ ಅಪರೂಪದ ಪೂಜಾ ಕೈಂಕರ್ಯ ನಡೆಯುತ್ತದೆ. ಶ್ರೀರಾಮನವಮಿ ಹಾಗೂ ಬಲಿಪಾಡ್ಯಮಿ ಪರ್ವದಿನಗಳಂದು ಮಾತ್ರ ಶ್ರೀ ಮೂಲರಾಮದೇವರಿಗೆ ಮಹಾಭಿಷೇಕ ನೆರವೇರಿಸುವುದು ಶ್ರೀಮಠದ ಪಾರಂಪರಿಕ ಸಂಪ್ರದಾಯವಾಗಿದೆ.
ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಧಾರ್ಮಿಕ ಪರಂಪರೆಯಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ಈ ಮಹಾಭಿಷೇಕವನ್ನು ಕಣ್ತುಂಬಿಕೊಳ್ಳಲು ವಿವಿಧೆಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಮಹಾಭಿಷೇಕ, ಗಂಧಲೇಪನ ಹಾಗೂ ಸಂಸ್ಥಾನ ಪೂಜೆಯ ಸಂದರ್ಭದಲ್ಲಿ ಶ್ರೀಮಠದ ಆವರಣದಲ್ಲಿ ಭಕ್ತಿಭಾವದ ವಾತಾವರಣ ನಿರ್ಮಾಣವಾಗಿತ್ತು.
ಪೂಜಾ ಕೈಂಕರ್ಯಗಳ ಬಳಿಕ ಭಕ್ತರು ಶ್ರೀ ಮೂಲರಾಮದೇವರ ದರ್ಶನ ಪಡೆದು, ಪರಮಪೂಜ್ಯ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಆಶೀರ್ವಾದ ಸ್ವೀಕರಿಸಿದರು.



