ಸಿಂಧನೂರು: ಅನಾರೋಗ್ಯದಿಂದ ಬಳಲುತ್ತಿದ್ದು, ಕುಟುಂಬದವರಿಂದ ಸೂಕ್ತ ಆರೈಕೆ ದೊರೆಯದೆ ಸಂಕಷ್ಟಕ್ಕೆ ಸಿಲುಕಿದ್ದ ರಾಯಚೂರು ನಗರದ ಎನ್ಜಿಒ ಕಾಲೋನಿ ನಿವಾಸಿ ರಂಗನಾಥ ಕೋರಿಶೆಟ್ಟಿ (55) ಅವರಿಗೆ ಸಿಂಧನೂರಿನ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ಬುದ್ಧಿಮಾಂದ್ಯ ಆಶ್ರಮದಲ್ಲಿ ಆಶ್ರಯ ಕಲ್ಪಿಸುವ ಮೂಲಕ ಮಾನವೀಯತೆ ಮೆರೆಯಲಾಗಿದೆ.
ರಾಯಚೂರು ನಗರದ ನೇತಾಜಿ ಪೊಲೀಸ್ ಠಾಣೆ ವ್ಯಾಪ್ತಿಯ ಎನ್ಜಿಒ ಕಾಲೋನಿಯಲ್ಲಿ ವಾಸವಾಗಿದ್ದ ರಂಗನಾಥ ಕೋರಿಶೆಟ್ಟಿ ಅವರು ಹಲವು ವರ್ಷಗಳಿಂದ ವಿವಿಧ ಸಾಮಾಜಿಕ ಹಾಗೂ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಸಮಾಜಮುಖಿ ಕಾರ್ಯಗಳಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಾ, ದಾನಧರ್ಮದ ಮೂಲಕ ಸ್ಥಳೀಯರ ಮೆಚ್ಚುಗೆಗೆ ಪಾತ್ರರಾಗಿದ್ದರು. ಆದರೆ ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾದ ಅವರು ಸೂಕ್ತ ಆರೈಕೆಯಿಲ್ಲದೆ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದರು ಎನ್ನಲಾಗಿದೆ.
ಅವರ ಪರಿಸ್ಥಿತಿಯನ್ನು ಗಮನಿಸಿದ ಸ್ಥಳೀಯ ನೀಲಕಂಠೇಶ್ವರ ಟೆಂಪಲ್ ಟ್ರಸ್ಟ್ ಪದಾಧಿಕಾರಿಗಳು, ಎನ್ಜಿಒ ಕಾಲೋನಿಯ ನಿವಾಸಿಗಳು ಹಾಗೂ ನೇತಾಜಿ ಪೊಲೀಸ್ ಠಾಣೆಯ ಅಧಿಕಾರಿಗಳು ಮಾನವೀಯ ನೆಲೆಯಲ್ಲಿ ನೆರವಿಗೆ ಮುಂದಾದರು.
ರಂಗನಾಥ ಅವರ ಆರೋಗ್ಯ ಸ್ಥಿತಿ ಹಾಗೂ ಆಶ್ರಯದ ಅಗತ್ಯವನ್ನು ಮನಗಂಡು ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಶ್ರೀ ಮಠ ಸೇವಾ ಟ್ರಸ್ಟ್ (ರಿ.), ಹರೇಟನೂರು ವತಿಯಿಂದ ನಡೆಸಲಾಗುತ್ತಿರುವ ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ಬುದ್ಧಿಮಾಂದ್ಯ ಆಶ್ರಮವನ್ನು ಸಂಪರ್ಕಿಸಲಾಯಿತು.
ವಿಷಯ ತಿಳಿದ ಆಶ್ರಮದ ಕಾರ್ಯಾಧ್ಯಕ್ಷ ಡಾ. ಚನ್ನಬಸವ ಸ್ವಾಮಿ ಹಿರೇಮಠ ಅವರು ರಂಗನಾಥ ಅವರಿಗೆ ಆಶ್ರಯ ನೀಡಲು ಸಮ್ಮತಿಸಿದರು. ಬಳಿಕ ಟ್ರಸ್ಟ್ ಪದಾಧಿಕಾರಿಗಳು, ಸ್ಥಳೀಯರು ಹಾಗೂ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ರಂಗನಾಥ ಅವರನ್ನು ಆಶ್ರಮಕ್ಕೆ ಕರೆತಂದು ಆಶ್ರಯ ಕಲ್ಪಿಸಲಾಯಿತು.
ಈ ಸಂದರ್ಭದಲ್ಲಿ ನೀಲಕಂಠೇಶ್ವರ ಟೆಂಪಲ್ ಟ್ರಸ್ಟ್ ಕಾರ್ಯದರ್ಶಿ ಬಸವರಾಜ ಪಡಶೆಟ್ಟಿ ಮಾತನಾಡಿ, ರಂಗನಾಥ ಕೋರಿಶೆಟ್ಟಿ ಅವರು ಸಮಾಜಸೇವೆಗೆ ಸದಾ ಮುಂಚೂಣಿಯಲ್ಲಿದ್ದ ವ್ಯಕ್ತಿ. ಅನೇಕ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಆರ್ಥಿಕ ಹಾಗೂ ಇತರ ರೀತಿಯ ನೆರವು ನೀಡುತ್ತಿದ್ದರು. ಇತರರ ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದ ಇಂತಹ ವ್ಯಕ್ತಿಯೇ ಇಂದು ಅನಾರೋಗ್ಯದಿಂದ ಅಸಹಾಯಕ ಸ್ಥಿತಿಗೆ ತಲುಪಿರುವುದು ನೋವಿನ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.
ರಂಗನಾಥ ಅವರ ಅನಾರೋಗ್ಯದ ಸ್ಥಿತಿ ಕುರಿತು ಪೊಲೀಸ್ ಇಲಾಖೆಯ ಅಧಿಕಾರಿಗಳು ಅವರ ಪತ್ನಿ ಹಾಗೂ ಮಕ್ಕಳ ಗಮನಕ್ಕೆ ತಂದಿದ್ದರೂ ಕುಟುಂಬದವರಿಂದ ನಿರೀಕ್ಷಿತ ಸ್ಪಂದನೆ ದೊರೆತಿಲ್ಲ ಎಂದು ಅವರು ತಿಳಿಸಿದರು.
ಇಂತಹ ಸಂದರ್ಭದಲ್ಲಿ ಸಿಂಧನೂರಿನ ಕಾರುಣ್ಯ ಆಶ್ರಮವನ್ನು ಸಂಪರ್ಕಿಸಿ ಪರಿಸ್ಥಿತಿಯನ್ನು ವಿವರಿಸಿದಾಗ ಆಶ್ರಮದ ಆಡಳಿತ ಮಂಡಳಿಯವರು ಯಾವುದೇ ಹಿಂಜರಿಕೆಯಿಲ್ಲದೆ ಆಶ್ರಯ ನೀಡಲು ಒಪ್ಪಿಕೊಂಡಿರುವುದು ಶ್ಲಾಘನೀಯ. ಸಂಕಷ್ಟದಲ್ಲಿರುವವರಿಗೆ ಆಶ್ರಯ ನೀಡುವುದರ ಮೂಲಕ ಕಾರುಣ್ಯ ಆಶ್ರಮ ನಿಜವಾದ ಮಾನವೀಯ ಸೇವೆಗೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಡಾ. ಚನ್ನಬಸವ ಸ್ವಾಮಿ ಹಿರೇಮಠ ಅವರು ದಾನಿಗಳ ಸಹಾಯ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಆಶ್ರಮವನ್ನು ನಡೆಸುತ್ತಾ ಅನಾಥರು, ನಿರ್ಗತಿಕರು, ವೃದ್ಧರು ಹಾಗೂ ಆರೈಕೆಯ ಅಗತ್ಯವಿರುವವರಿಗೆ ನೆರವಾಗುತ್ತಿರುವುದು ಸಮಾಜಕ್ಕೆ ಪ್ರೇರಣೆಯಾಗಿದೆ. ಇಂತಹ ಸೇವಾ ಸಂಸ್ಥೆಗಳಿಗೆ ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳು ಬೆಂಬಲ ನೀಡುವುದು ಅಗತ್ಯವಾಗಿದೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ಕಾರುಣ್ಯ ಆಶ್ರಮದ ಸಮಾಜಮುಖಿ ಸೇವಾ ಕಾರ್ಯಗಳಿಗೆ ನೀಲಕಂಠೇಶ್ವರ ಟೆಂಪಲ್ ಟ್ರಸ್ಟ್ ಹಾಗೂ ಎನ್ಜಿಒ ಕಾಲೋನಿಯ ನಿವಾಸಿಗಳ ವತಿಯಿಂದ ಸಾಧ್ಯವಾದಷ್ಟು ಸಹಾಯ ಮತ್ತು ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಆಶ್ರಮದ ಕಾರ್ಯಾಧ್ಯಕ್ಷ ಡಾ. ಚನ್ನಬಸವ ಸ್ವಾಮಿ ಹಿರೇಮಠ ಹಾಗೂ ಸಿಬ್ಬಂದಿ ರಂಗನಾಥ ಅವರನ್ನು ಸ್ವಾಗತಿಸಿ, ಆಶ್ರಮದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಿದರು.
ಈ ಸಂದರ್ಭದಲ್ಲಿ ನೀಲಕಂಠೇಶ್ವರ ಟೆಂಪಲ್ ಟ್ರಸ್ಟ್ ಅಧ್ಯಕ್ಷ ಮಹಾಂತೇಶ ಪೂರತಿಪ್ಲಿ, ಕಾರ್ಯದರ್ಶಿ ಬಸವರಾಜ ಪಡಶೆಟ್ಟಿ, ಸುರೇಶ ಕೋರಿಶೆಟ್ಟಿ, ರಾಯಚೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ದ್ವಿತೀಯ ದರ್ಜೆ ಸಹಾಯಕಿ ಶೈಲಜಾ ಕುಲಕರ್ಣಿ, ನಿವೃತ್ತ ಜಮಾದಾರ ಬಸವರಾಜ, ನೇತಾಜಿ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಸಿಬ್ಬಂದಿ ಮಂಜುಳಾ, ಆಶ್ರಮದ ಕಾರ್ಯಾಧ್ಯಕ್ಷ ಡಾ. ಚನ್ನಬಸವ ಸ್ವಾಮಿ ಹಿರೇಮಠ, ಸಿಬ್ಬಂದಿಗಳಾದ ಮರಿಯಪ್ಪ, ಹರ್ಷವರ್ಧನ ಸೇರಿದಂತೆ ನೀಲಕಂಠೇಶ್ವರ ಟೆಂಪಲ್ ಟ್ರಸ್ಟ್ ಪದಾಧಿಕಾರಿಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.



