ರಾಯಚೂರು, ನ. 7: ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಭೂ ಒಡೆತನ ಯೋಜನೆಯಡಿ ರಾಯಚೂರು ಜಿಲ್ಲೆಯ ಮಾನ್ವಿ, ಸಿರವಾರ ಹಾಗೂ ಸಿಂಧನೂರು ತಾಲೂಕುಗಳಲ್ಲಿ ಸುಮಾರು ₹19 ಕೋಟಿ ಅವ್ಯವಹಾರ ನಡೆದಿದೆ ಎಂದು ಕರ್ನಾಟಕ ರಾಜ್ಯ ಭೋವಿ-ವಡ್ಡರ ಸಮಾಜದ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಬಿ.ಕೆ. ಜಯಶ್ರೀ ಆರೋಪಿಸಿದರು.
ಈ ಸಂಬಂಧ ಸಮಾಜದ ಪದಾಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಅವರು, ಬಡ ಹಾಗೂ ಭೂರಹಿತ ಕುಟುಂಬಗಳಿಗೆ ಫಲವತ್ತಾದ ಕೃಷಿ ಜಮೀನು ಒದಗಿಸುವ ಉದ್ದೇಶದ ಯೋಜನೆಯಲ್ಲಿ ಅಧಿಕಾರಿಗಳು ಹಾಗೂ ಮಧ್ಯವರ್ತಿಗಳು ಶಾಮೀಲಾಗಿ ಸರ್ಕಾರದ ಅನುದಾನ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ದೂರಿದರು.
ಯೋಜನೆಯಡಿ ಕೃಷಿಗೆ ಯೋಗ್ಯವಾದ ಜಮೀನುಗಳ ಬದಲು ಸವಳು ಭೂಮಿ ಹಾಗೂ ಜಾಲಿ ಗಿಡಗಳಿಂದ ಕೂಡಿದ ಅನುಪಯುಕ್ತ ಜಮೀನುಗಳನ್ನು ಖರೀದಿಸಲಾಗಿದೆ. 2023-24ನೇ ಸಾಲಿನಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿಯು 42 ಎಕರೆ ಭೂಮಿ ಖರೀದಿಗೆ ಮಾತ್ರ ಅನುಮೋದನೆ ನೀಡಿತ್ತು. ಆದರೆ ನಂತರ ಸಮಿತಿಯ ಅನುಮೋದನೆಯಿಲ್ಲದೆ, ಕಂದಾಯ ಮತ್ತು ನೀರಾವರಿ ಅಧಿಕಾರಿಗಳ ಸ್ಥಳ ಪರಿಶೀಲನೆಯನ್ನೂ ನಡೆಸದೆ ಭೂಮಿ ಖರೀದಿಸಲಾಗಿದೆ ಎಂದು ಆರೋಪಿಸಿದರು.
ಸುಮಾರು ₹4.50 ಲಕ್ಷ ಮೌಲ್ಯದ ಜಮೀನನ್ನು ದಾಖಲೆಗಳಲ್ಲಿ ₹12.50 ಲಕ್ಷ ಎಂದು ತೋರಿಸಿ ಹಣ ದುರುಪಯೋಗಪಡಿಸಿಕೊಳ್ಳಲಾಗಿದೆ. ಅಲ್ಲದೆ, 48 ಫಲಾನುಭವಿಗಳಿಂದ ಮಧ್ಯವರ್ತಿಗಳು ಹಣ ವಸೂಲಿ ಮಾಡಿದ್ದು, ಸಾಲ ಮಂಜೂರಾತಿಗೂ ಕಮಿಷನ್ ಪಡೆದಿದ್ದಾರೆ. ಕೆಲವು ಫಲಾನುಭವಿಗಳ ಹೆಸರಿನಲ್ಲಿ ಜಮೀನು ನೋಂದಣಿಯಾಗಿದ್ದರೂ ವಾಸ್ತವದಲ್ಲಿ ಭೂಮಿ ಹಸ್ತಾಂತರವಾಗಿಲ್ಲ ಎಂದು ದೂರಿದರು.
ಪ್ರಕರಣದ ಕುರಿತು ಉನ್ನತ ಮಟ್ಟದ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ಅಗತ್ಯವಿದ್ದರೆ ಸಿಬಿಐ ತನಿಖೆಗೆ ಶಿಫಾರಸು ಮಾಡಬೇಕು. ಆರೋಪ ಎದುರಿಸುತ್ತಿರುವ ನಿಗಮದ ಜಿಲ್ಲಾ ವ್ಯವಸ್ಥಾಪಕ ರವಿ ಎಂ. ಅವರನ್ನು ಅಮಾನತುಗೊಳಿಸಿ, ಭೂ ಖರೀದಿ ಹಾಗೂ ಸಾಲ ಮಂಜೂರಾತಿಗೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.
ಅವ್ಯವಹಾರ ಸಾಬೀತಾದರೆ ತಪ್ಪಿತಸ್ಥರಿಂದ ಹಣ ವಸೂಲಿ ಮಾಡಬೇಕು. ಸಂತ್ರಸ್ತ ಫಲಾನುಭವಿಗಳಿಗೆ ನೀರಾವರಿ, ವಿದ್ಯುತ್ ಹಾಗೂ ರಸ್ತೆ ಸೌಲಭ್ಯವಿರುವ ಫಲವತ್ತಾದ ಕೃಷಿ ಜಮೀನು ಒದಗಿಸಿ ನ್ಯಾಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ವಿ.ಎಸ್. ಯಲ್ಲಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ದೇವೇಂದ್ರ ಬಿಚ್ಚಾಲಿ, ತಾಲೂಕು ಅಧ್ಯಕ್ಷ ಮಲ್ಲೇಶ್ ಚಂದ್ರಬಂಡಾ, ಪ್ರಧಾನ ಕಾರ್ಯದರ್ಶಿ ಡಬ್ಲ್ಯೂ. ಈರೇಶ ಗಾಣಧಾಳ, ರಾಜ್ಯ ಸಮಿತಿ ಸದಸ್ಯ ವಿ. ಗೋವಿಂದು ಸೇರಿದಂತೆ ಇತರರು ಉಪಸ್ಥಿತರಿದ್ದರು.



