ರಾಯಚೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ರಾಯಚೂರು ವಲಯದ ವತಿಯಿಂದ ನಗರದ ಎಲ್‌ವಿಡಿ ಕಾಲೇಜು ಹಾಗೂ ಕೆಎಸ್‌ಸಿಎ ಕ್ರಿಕೆಟ್ ಮೈದಾನಗಳಲ್ಲಿ ಆಯೋಜಿಸಿರುವ ಅಂಡರ್-14 ಅಂತರ ಜಿಲ್ಲಾ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಲಾಗಿದ್ದು, ಆರಂಭಿಕ ಪಂದ್ಯಗಳಲ್ಲಿ ಬಾಗಲಕೋಟೆ ಮತ್ತು ರಾಯಚೂರು ತಂಡಗಳು ಭರ್ಜರಿ ಜಯ ಸಾಧಿಸಿವೆ.

ಪಂದ್ಯಾವಳಿಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೆಎಸ್‌ಸಿಎ ರಾಯಚೂರು ವಲಯದ ಮಾಜಿ ಸಂಚಾಲಕ ಸೇತು ಮಾಧವ್ ರಾವ್, ಅಧ್ಯಕ್ಷ ಚಂದ್ರು ಮೈಲಾರಿ, ಜಿಲ್ಲಾ ಸಂಯೋಜಕ ಎನ್. ವಿನಾಯಕ ರಾವ್ ಹಾಗೂ ಟಿಎಸ್‌ಎಸ್ ಸದಸ್ಯ ವಿಷ್ಣು ಚೌಧರಿ ಉಪಸ್ಥಿತರಿದ್ದು, ಆಟಗಾರರನ್ನು ಪ್ರೋತ್ಸಾಹಿಸಿದರು.

ಎಲ್‌ವಿಡಿ ಕಾಲೇಜು ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ಬೀದರ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಬಾಗಲಕೋಟೆ ತಂಡ 419 ರನ್‌ಗಳ ಬೃಹತ್ ಮೊತ್ತ ದಾಖಲಿಸಿತು. ಅಭಿನವ್ 117 ಎಸೆತಗಳಲ್ಲಿ 213 ರನ್ ಗಳಿಸಿ ಗಮನ ಸೆಳೆದರು. ಪ್ರೀತಮ್ ಕುಮಾರ್ 65 ಹಾಗೂ ಮಿಥುನ್ ಆನಂದ್ 40 ರನ್‌ಗಳ ಕೊಡುಗೆ ನೀಡಿದರು.

ಬಾಗಲಕೋಟೆ ತಂಡದ ಮಿಥುನ್ ಆನಂದ್ ಐದು ಓವರ್‌ಗಳಲ್ಲಿ ಕೇವಲ 9 ರನ್ ನೀಡಿ 6 ವಿಕೆಟ್ ಕಬಳಿಸಿ ಎದುರಾಳಿ ತಂಡದ ಬ್ಯಾಟಿಂಗ್‌ಗೆ ಕಡಿವಾಣ ಹಾಕಿದರು. ಬೀದರ್ ಪರ ಆರೂಷ್ 17 ರನ್ ಗಳಿಸಿದರು. ಅಂತಿಮವಾಗಿ ಬಾಗಲಕೋಟೆ ತಂಡ ಜಯಭೇರಿ ಬಾರಿಸಿತು.

ಕೆಎಸ್‌ಸಿಎ ಮೈದಾನದಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ಟಾಸ್ ಗೆದ್ದ ರಾಯಚೂರು ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ರಾಜಾಮರೇಶ್ವರ 81 ಎಸೆತಗಳಲ್ಲಿ 129 ರನ್ ಹಾಗೂ ಅರ್ಜುನ್ ರಾಥೋಡ್ 50 ಎಸೆತಗಳಲ್ಲಿ 52 ರನ್ ಗಳಿಸಿದರು. ಯಾದಗಿರಿ ಪರ ತೇಜಸ್ ಕುಮಾರ್ 44 ರನ್ ನೀಡಿ ಮೂರು ವಿಕೆಟ್ ಪಡೆದರು.

ಯಾದಗಿರಿ ತಂಡದ ಸಂದೀಪ್ 31 ರನ್ ಗಳಿಸಿದರೆ, ರಾಯಚೂರಿನ ಮಹತೇಜ್ ಮೂರು ಹಾಗೂ ಪಾಣಿಶ್ರಮ ಎರಡು ವಿಕೆಟ್ ಪಡೆದು ತಂಡದ ಗೆಲುವಿಗೆ ನೆರವಾದರು.

ಆಯ್ಕೆ ಸಮಿತಿ ಸದಸ್ಯರಾದ ಸಚಿನ್, ಹರಿಪ್ರಸಾದ್ ಯಾದವ್, ರಾಹುಲ್, ಹಿರಿಯ ಅಂಪೈರ್ ಪಾರ್ಥಸಾರಥಿ, ಈರಣ್ಣ ಚಿತ್ರಗಾರ, ಪ್ರದೀಪ್ ಸೇರಿದಂತೆ ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು. ರವಿರಾಜ್ ಬಿ.ಆರ್. ಕಾರ್ಯಕ್ರಮ ನಿರೂಪಿಸಿದರು.

ಯುವ ಕ್ರಿಕೆಟಿಗರ ಪ್ರತಿಭೆ ಗುರುತಿಸಿ, ಉನ್ನತ ಮಟ್ಟದ ಸ್ಪರ್ಧೆಗಳಿಗೆ ಸಜ್ಜುಗೊಳಿಸಲು ಇಂತಹ ಪಂದ್ಯಾವಳಿಗಳು ಸಹಕಾರಿಯಾಗಿವೆ ಎಂದು ಗಣ್ಯರು ಅಭಿಪ್ರಾಯಪಟ್ಟರು.