ರಾಯಚೂರು: ರಾಯಚೂರು ಜಿಲ್ಲಾ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಹಿರಿಯ ಸಾಹಿತಿ, ಲೇಖಕ, ಸಂಶೋಧಕ ಹಾಗೂ ನಾಟಕಕಾರ ರಾಮಣ್ಣ ಹವಳೆ ಅವರನ್ನು ಸಾಹಿತ್ಯಾಭಿಮಾನಿಗಳು, ಶಿಕ್ಷಕರು ಹಾಗೂ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಅವರ ನಿವಾಸಕ್ಕೆ ಭೇಟಿ ನೀಡಿ ಆತ್ಮೀಯವಾಗಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮಾನ್ವಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಮೂಕಪ್ಪ ಕಟ್ಟಿಮನಿ ಮಾತನಾಡಿ, ರಾಮಣ್ಣ ಹವಳೆ ಅವರು ಕನ್ನಡ ಸಾಹಿತ್ಯ, ಸಂಶೋಧನೆ ಹಾಗೂ ನಾಟಕ ಕ್ಷೇತ್ರಗಳಲ್ಲಿ ತಮ್ಮದೇ ಆದ ವಿಶಿಷ್ಟ ಕೊಡುಗೆ ನೀಡುವ ಮೂಲಕ ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ. ಅವರ ಸುದೀರ್ಘ ಸಾಹಿತ್ಯ ಸೇವೆ, ಸಂಶೋಧನಾ ಮನೋಭಾವ ಹಾಗೂ ಸೃಜನಶೀಲ ಬರವಣಿಗೆ ಕನ್ನಡ ಸಾಹಿತ್ಯದ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಬಗ್ಗೆ ಅಪಾರ ಕಾಳಜಿ ಹೊಂದಿರುವ ರಾಮಣ್ಣ ಹವಳೆ ಅವರು ತಮ್ಮ ಸಾಹಿತ್ಯಿಕ ಚಟುವಟಿಕೆಗಳ ಮೂಲಕ ಓದುಗರಲ್ಲಿ ಸಾಹಿತ್ಯಾಸಕ್ತಿ ಬೆಳೆಸುವ ಕೆಲಸ ಮಾಡಿದ್ದಾರೆ. ಅವರಂತಹ ಅನುಭವಿ ಹಾಗೂ ಹಿರಿಯ ಸಾಹಿತಿಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಜಿಲ್ಲೆಯ ಸಾಹಿತ್ಯ ವಲಯಕ್ಕೆ ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.

ಸಾಹಿತ್ಯ ಸಮ್ಮೇಳನಗಳು ಕೇವಲ ಸಾಹಿತಿಗಳ ಸಮಾಗಮಕ್ಕೆ ಸೀಮಿತವಾಗದೆ ಕನ್ನಡ ಭಾಷೆ, ನಾಡಿನ ಸಂಸ್ಕೃತಿ, ಸಾಮಾಜಿಕ ಚಿಂತನೆ ಹಾಗೂ ಸಾಹಿತ್ಯದ ಬೆಳವಣಿಗೆಗೆ ವೇದಿಕೆಯಾಗಬೇಕು. ಹಿರಿಯ ಸಾಹಿತಿಗಳ ಅನುಭವ ಮತ್ತು ಮಾರ್ಗದರ್ಶನ ಯುವ ಬರಹಗಾರರಿಗೆ ಪ್ರೇರಣೆಯಾಗಬೇಕು. ಈ ನಿಟ್ಟಿನಲ್ಲಿ ರಾಮಣ್ಣ ಹವಳೆ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿರುವ 12ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅರ್ಥಪೂರ್ಣವಾಗಿ ಯಶಸ್ವಿಯಾಗಲಿ ಎಂದು ಆಶಿಸಿದರು.

ಈ ಸಂದರ್ಭದಲ್ಲಿ ಮಾನ್ವಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ನಿವೃತ್ತ ಮುಖ್ಯ ಶಿಕ್ಷಕರಾದ ನಂದೀಶ್ ಬಂಡಿ, ಹನುಮಂತಪ್ಪ ಟಿ., ಯಮನಪ್ಪ, ಸಾಹಿತಿಗಳಾದ ತಾಯಪ್ಪ ಮರ್ಚಟ್ಹಾಳ್, ಮಹಾಂತೇಶ ಬಿರಾದಾರ, ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷ ಯಂಕಪ್ಪ ಪಿರಂಗಿ, ಜಿ. ತಿಮ್ಮಾಪುರ ಶಾಲೆಯ ಮುಖ್ಯ ಶಿಕ್ಷಕ ಚಂದ್ರಪ್ಪ ಸೇರಿದಂತೆ ಶಿಕ್ಷಕರು, ಸಾಹಿತಿಗಳು ಹಾಗೂ ಸಾಹಿತ್ಯಾಭಿಮಾನಿಗಳು ಉಪಸ್ಥಿತರಿದ್ದರು.